Love You Racchu Review: ನಿಮ್ಮ 'ಕರ್ಮ' ನಿಮ್ಮನ್ನು ಬಿಡುವುದಿಲ್ಲ: ಇದು 'ಲವ್‌ ಯು ರಚ್ಚು' ಸಂದೇಶ!

 Love You Racchu Review: ನಿಮ್ಮ 'ಕರ್ಮ' ನಿಮ್ಮನ್ನು ಬಿಡುವುದಿಲ್ಲ: ಇದು 'ಲವ್‌ ಯು ರಚ್ಚು' ಸಂದೇಶ!



ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಜಾತ್ರೆ ಶುರುವಾಗಿದೆ. ಪ್ರತೀ ವಾರವೂ ಸಾಕಷ್ಟು ಚಿತ್ರಗಳು ತೆರೆಗೆ ಬರುತ್ತವೆ. ಅಂತೆಯೇ ಈ ವಾರ ಒಂದಷ್ಟು ನಿರೀಕ್ಷೆ ಜೊತೆಗೆ ರಿಲೀಸ್‌ ಆಗುತ್ತಿರುವ ಚಿತ್ರ 'ಲವ್‌ ಯು ರಚ್ಚು'. ನಾಯಕಿಯ ಹೆಸರನ್ನೇ ಚಿತ್ರದ ಟೈಟಲ್ ಮಾಡಲಾಗಿದೆ. ಹಾಗಾಗಿ ಇಡೀ ಚಿತ್ರ 'ರಚ್ಚು' ಎನ್ನುವ ನಾಯಕಿಯ ಪಾತ್ರದದ ಸುತ್ತಲೇ ಸುತ್ತುತ್ತದೆ.

ರಚ್ಚು ಪಾತ್ರದ ಸುತ್ತಾ ಇಡೀ ಕಥೆ ಸಾಗುತ್ತದೆ. ಹಾಗಂತ ಒಂದೇ ಪಾತ್ರಕ್ಕೆ ಅನುಗುಣವಾಗಿ ಚಿತ್ರದ ಕಥೆ ಸುತ್ತಿಕೊಂಡಿಲ್ಲ. ಬದಲಿಗೆ ರಚ್ಚು ಪಾತ್ರದ ಜೊತೆಗೆ ಪ್ರಯಾಣ ಮಾಡುವ ಹಲವು ಪಾತ್ರಗಳಿಗೂ ರಚ್ಚು ಪಾತ್ರವೇ ಮೂಲ ಕಾರಣ ಆಗಿರುತ್ತದೆ. ಬಿಡಿಸಿದಷ್ಟು ಗಂಟುಗಳು, ಗಟ್ಟಿ ಆಗುತ್ತಾ ಹೋಗುತ್ತವೆ. ಈ ಗಂಟುಗಳೇ ಚಿತ್ರವನ್ನು ನೋಡುವ ಒಂದಷ್ಟು ಕುತೂಹಲಗಳಿಗೆ ಕಾರಣ ಅಷ್ಟೇ. 

ಚಿತ್ರದ ಟ್ರೇಲರ್ ನೋಡಿದರೆ, ಚಿತ್ರದಲ್ಲಿ ಒಂದು ಕ್ರೈಮ್‌ ನಡೆಯುತ್ತದೆ. ಅದಕ್ಕೆ ಕಾರಣ ನಾಯಕಿ ಆಗಿರುತ್ತಾಳೆ. ಅದರಿಂದ ನಟಿಯನ್ನು ಹೊರ ತರಲು ನಾಯಕ ಒಂದಷ್ಟು ಸಾಹಸ ಮಾಡುತ್ತಾನೆ ಎನ್ನುವುದು ಟ್ರೇಲರ್‌ನಿಂದ ಗೊತ್ತಾಗುತ್ತದೆ. ಇದನ್ನು ಮೀರಿದ್ದು ಚಿತ್ರದಲ್ಲಿ ಏನಾದರೂ ಇದೆಯಾ? ಅಂದರೆ, ಹೌದು ಇದನ್ನು ಮೀರಿದ ಒಂದಷ್ಟು ಅಂಶಗಳು ಅನಾವರಣಗೊಳ್ಳುತ್ತವೆ. 

ಎರಡು ದಿನದಲ್ಲಿ ನಡೆಯುವ ಕರ್ಮದ ಕಥೆ: 'ಲವ್‌ ಯು ರಚ್ಚು'! 

ಇಡೀ ಚಿತ್ರ ಎರಡು ದಿನದಲ್ಲಿ ನಡೆಯುವ ಕಥೆಯಾಗಿದೆ. ಅಂದರೆ ಚಿತ್ರ ಆರಂಭವಾಗಿ, ಬಳಿಕ ಎರಡು ದಿನಗಳಲ್ಲಿ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿ ಕೊಡಲಾಗಿದೆ. ಚಿತ್ರದ ನಾಯಕಿ ರಚಿತಾ ಅಲಿಯಾಸ್ ರಚ್ಚು ಹುಟ್ಟು ಹಬ್ಬದ ಚರ್ಚೆಯಿಂದ ಚಿತ್ರ ಆರಂಭ ಆಗುತ್ತದೆ. ಇದು ಅತಿಯಾಗಿ ಪ್ರೀತಿಸೋ ಗಂಡ, ಹೆಂಡತಿಯ ಕಥೆ. ಹಾಗಾಗಿ ಹೆಂಡತಿ ಹುಟ್ಟು ಹಬ್ಬಕ್ಕೆ ಪತಿ ಉತ್ತಮ ಉಡುಗೊರೆ ಕೊಡಬೇಕಲ್ಲವಾ?. ಹಾಗೇ ನಟ ಅಜಯ್ ಕೂಡ ದುಬಾರಿ ಉಡುಗೊರೆ ಖರೀದಿಸಿ ಪತ್ನಿಗಾಗಿ ಕೊಂಡೊಯ್ಯುತ್ತಾನೆ. ಇಲ್ಲಿಂದ ರಚ್ಚು ಮತ್ತು ಅಜಯ್ ಕಥೆ ಶುರುವಾಗುತ್ತೆ.

ಆರಂಭದಲ್ಲಿ ಅತೀವ ಕುತೂಹಲ, ರೋಚಕತೆ! 

ಚಿತ್ರದ ಶುರುವಿನಲ್ಲಿ ಕುತೂಹಲ, ರೋಚಕತೆಯಿಂದ ಪ್ರೇಕ್ಷಕರನ್ನು ಕಟ್ಟಿ ಹಾಕುವಲ್ಲಿ ನಿರ್ದೇಶಕ ಯಶಸ್ವಿ ಆಗಿದ್ದರೂ ಸಹ ಅದು ಸಿನಿಮಾ ಪೂರ್ತಿ ಕಾಣುವುದಿಲ್ಲ. ಆರಂಭದಲ್ಲೇ ರೋಚಕ ಟ್ವಿಸ್ಟ್ ಇರುವ ಕಾರಣಕ್ಕೆ, ಅದೇ ನಿರೀಕ್ಷೆಯಲ್ಲಿ ಪ್ರೇಕ್ಷಕ ಸಿನಿಮಾ ನೋಡಲು ಮುಂದಾಗುತ್ತಾನೆ. ಆದರೆ ಆ ನಿರೀಕ್ಷೆಗಳಿಗೆ ಕೆಲವೆಡೆ ತಣ್ಣೀರು ಹಾಕಿರುವುದು ಕಂಡುಬರುತ್ತದೆ. ಚಿತ್ರದ ಆರಂಭದಲ್ಲಿ ನಡೆಯುವ ಕೊಲೆ ಒಂದಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್‌ ಇಡಲಾಗಿದೆ. ಆದರೆ ಅಲ್ಲಿ ತನಕ ಪ್ರೇಕ್ಷಕರು ಎಂಗೇಜ್ ಆಗಿರಬೇಕಲ್ಲ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಮತ್ತಷ್ಟು ತಂತ್ರಗಳನ್ನು ಬಳಸಬಹುದಿತ್ತು ಎಂಬ ಅಭಿಪ್ರಾಯ ಸಹಜವಾಗಿ ಬರುತ್ತದೆ. 

ಪತ್ನಿಯನ್ನು ಬೆಟ್ಟದಷ್ಟು ಪ್ರೀತಿಸುವ ಪತಿ!

 ಚಿತ್ರದ ನಾಯಕ ತನ್ನ ಪತ್ನಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಹಾಗಾಗಿ ಆಕೆ ಮಾಡಿದ ಎಲ್ಲಾ ತಪ್ಪುಗಳನ್ನು ಸಲೀಸಾಗಿ ಕ್ಷಮಿಸಿ ಬಿಡುತ್ತಾನೆ. ಅಷ್ಟೇ ಅಲ್ಲ ಆಕೆಗೆ ಕೊಂಚ ನೋವಾದರು ಕೂಡ ಸಹಿಸಿಕೊಳ್ಳುವುದಿಲ್ಲ. ಹಾಗಾಗಿ ಪತ್ನಿಗಾಗಿ ತಾನು ಮಾಡಬಾರದ್ದನ್ನೆಲ್ಲಾ ಮಾಡುತ್ತಾನೆ. ಒಬ್ಬ ನಾಯಕ ಹೀಗೆ ಮಾಡುವುದು ತಪ್ಪು ಅಂತ ಅನಿಸುವುದಿಲ್ಲ. ಕಾರಣ ಆತ ಎಲ್ಲವನ್ನೂ ಮಾಡುವುದು ತಾನು ಹುಚ್ಚನಂತೆ ಪ್ರೀತಿಸುವ ತನ್ನ ರಚ್ಚುಗಾಗಿ. 

'ಲವ್‌ಯು ರಚ್ಚು' ಟೈಟಲ್‌ಗೆ ಕಥೆಯಲ್ಲಿ ಉತ್ತಮ ಅರ್ಥ! 

ಚಿತ್ರದಲ್ಲಿ ನಾಯಕ, ನಾಯಕಿಗೆ ಪ್ರಪೋಸ್‌ ಮಾಡುವುದರಿಂದಲೇ, ಚಿತ್ರಕ್ಕೆ ಈ ಟೈಟಲ್‌ ಇಡಲಾಗಿದೆ ಎನಿಸುತ್ತದೆ. ಅದು ನಿಜ. ಆದರೆ ಅದು ಯಾವ ಸಂದರ್ಭದಲ್ಲಿ ಎನ್ನುವುದು ಮುಖ್ಯ. ನಾಯಕ ಪ್ರಪೋಸ್ ಮಾಡುವ ಸನ್ನಿವೇಶ ಕೂಡ ಚಿತ್ರದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗಾಗಿ ಅಷ್ಟೇ ಅಚ್ಚು ಕಟ್ಟಾಗಿ ಲವ್‌ ಪ್ರಪೋಸ್ ಸನ್ನಿವೇಶವನ್ನೂ ಕಟ್ಟಿ ಕೊಡಲಾಗಿದೆ. ಎಲ್ಲಾ ಕರ್ಮಗಳು ಕಳೆಯಿತು ಎಂದು ಹೊಸ ಜೀವನಕ್ಕೆ ಮುಂದಾಗುವ ಸಮಯದಲ್ಲಿ, ನಾಯಕ "ಲವ್‌ ಯು ರಚ್ಚು" ಎಂದು ಹೇಳುತ್ತಾನೆ. ಇದು ಕ್ಲೈಮ್ಯಾಕ್ಸ್‌ಗೂ ಮುನ್ನ ಬರುವ ಸನ್ನಿವೇಷ. ಹಾಗಾಗಿ ಇದುವೇ ಕ್ಲೈಮ್ಯಾಕ್ಸ್‌ ಎಂದುಕೊಂಡರೆ, ಅದನ್ನು ಸುಳ್ಳು ಮಾಡಿ ಮತ್ತೊಂದು ರೋಚಕ ಟ್ವಿಸ್ಟ್‌ ಕೊಟ್ಟಿದ್ದಾರೆ ನಿರ್ದೇಶಕ. 

ನೀವು ಮಾಡಿದ ಕರ್ಮ ನಿಮ್ಮನ್ನು ಸುತ್ತಿಕೊಳ್ಳುತ್ತದೆ! 

ಚಿತ್ರದಲ್ಲಿ ಏನಿದೆ. ಚಿತ್ರವನ್ನು ಯಾಕೆ ನೋಡಬೇಕು ಅಂದರೆ, ಚಿತ್ರದಲ್ಲಿ ಕರ್ಮದ ಕಥೆಯನ್ನು ಹೇಳಲಾಗಿದೆ. ನೀವು ಮಾಡಿದ ಕರ್ಮಗಳು ನಿಮ್ಮನ್ನು ಬಿಡುವುದಿಲ್ಲ. ಯಾವುದಾದರೊಂದು ರೂಪದಲ್ಲಿ ಬಂದು ನಿಮಗೆ ಸುತ್ತಿಕೊಳ್ಳುತ್ತವೆ. ಎನ್ನುವುದನ್ನು ಚಿತ್ರದಲ್ಲಿ ಪ್ರಮುಖವಾಗಿ ಹೇಳಲಾಗಿದೆ. ಚಿತ್ರದ ಕೊನೆಯಲ್ಲಿ ಈ ಅಂಶವನ್ನು ಎಲ್ಲರೂ ಒಪ್ಪಿಕೊಳ್ಳುವ ಹಾಗೆ ಕ್ಲೈಮ್ಯಾಕ್ಸ್ ಮಾಡಲಾಗಿದೆ. ಅಂದರೆ ನೀವು ಮಾಡಿದ ಕರ್ಮಗಳನ್ನು ಯಾರೇ ಕ್ಷಮಿಸಿದರು, ಯಾರೇ ಒಪ್ಪಿದರು ಆ ಕರ್ಮ ನಿಮ್ಮನ್ನು ಬಿಡುವುದಿಲ್ಲ ಎನ್ನುವುದನ್ನು ಕಥೆಯ ಕೊನೆಯಲ್ಲಿ ಹೇಳಲಾಗಿದೆ. 

ರಚಿತಾ ರಾಮ್, ಅಜಯ್ ರಾವ್ ಜೋಡಿ ಚೆಂದ! 

ಇನ್ನು ತೆರೆಯ ಮೇಲೆ ರಚಿತಾ ರಾಮ್‌ ಮತ್ತು ಅಜಯ್‌ ರಾವ್ ಜೋಡಿ ಚೆಂದ ಎನಿಸುತ್ತದೆ. ಪಾತ್ರಕ್ಕೆ ತಕ್ಕಂತೆ ಇಬ್ಬರು ಉತ್ತಮ ಅಭಿನಯವನ್ನು ತೋರಿದ್ದಾರೆ. ಇಲ್ಲಿ ರಚಿತಾ ಮತ್ತು ಅಜಯ್‌ ರಾವ್ ಇಬ್ಬರ ಪಾತ್ರಗಳು ಕೂಡ ಕಥೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಜೊತೆಗೆ ಸಾಗುತ್ತವೆ. ಚಿತ್ರದ ಟೈಟಲ್ ರಚ್ಚು ಅಂದ ಮಾತ್ರಕ್ಕೆ ಇಲ್ಲಿ ರಚಿತಾ ಪಾತ್ರಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗಿಲ್ಲ. ನಾಯಕನ ಪಾತ್ರ ಇಲ್ಲ ಅಂದರೆ ನಾಯಕಿ ಇಲ್ಲ. ಹಾಗಾಗಿ ಒಂದೇ ನಾಣ್ಯದ, ಎರಡು ಮುಖಗಳಿದ್ದಂತೆ ಈ ಎರಡು ಪಾತ್ರಗಳು. ಒಟ್ಟಾರೆ ಸಿನಿಮಾ ನೋಡುವಾಗ ಒಂದಷ್ಟು ಬೇರೆ, ಬೇರೆ ಚಿತ್ರಗಳು ನೆನಪಿಗೆ ಬರುತ್ತವೆ. ಕೆಲವು ಸನ್ನಿವೇಷಗಳನ್ನು, ಈ ಮೊದಲು ಯಾವ ಚಿತ್ರದಲ್ಲಿ ನೋಡಿದ್ದೀರಿ ಎನ್ನುವುದು ಕೂಡ ನೆನಪಿಗೆ ಬರುತ್ತದೆ. ಹಾಗಾಗಿ ಇದು ಕಥೆ ಅಂತ ಅನಿಸುವುದಿಲ್ಲ. ಹಳೇ ಟೇಪ್‌ ರೆಕಾರ್ಡರನ್ನು ತಿರುವಿ ಹಾಕಲಾಗಿದೆ. ಈಗಾಗಲೇ ಈ ರೀತಿಯ ಹಲವು ಕಥೆಗಳು ಬಂದಿವೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಊಹಿಸದ ಟ್ವಿಸ್ಟ್‌ ಇರುವುದು ಕೊಂಚ ಸರ್ಪ್ರೈಸಿಂಗ್‌ ಎನಿಸುತ್ತದೆ. ಈ ಚಿತ್ರಕ್ಕೆ ಶಂಕರ್ ರಾಜ್‌ ನಿರ್ದೇಶನವಿದೆ. ಜಿ ಸಿನಿಮಾಸ್‌ ಅಡಿಯಲ್ಲಿ ಗುರುದೇಶ್‌ ಪಾಂಡೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ.ಸುರೇಶ್, ಅಚ್ಚುತ್‌ ಕುಮಾರ್, ಅರುಣ್ ಗೌಡ, ರಘು ಶಿವಮೊಗ್ಗ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

source: filmbeat

Post a Comment

Previous Post Next Post

Contact Form