Dhairyam Movie Review

ಲವರ್ ಬಾಯ್ ಅಜಯ್ ರಾವ್ ಒಂದೇ ಏಟಿಗೆ ಆಕ್ಷನ್ ಪಾತ್ರದಲ್ಲಿ ನಟಿಸಲು ಶುರು ಮಾಡಿದ್ದಾಗ ಬಹುತೇಕರು `ಆಕ್ಷನ್ ಸಿನಿಮಾ ಅಜಯ್‌ಗೆ ಹೊಂದುತ್ತಾ?’ ಅಂತಾ ಅನುಮಾನ ವ್ಯಕ್ತಪಡಿಸಿದ್ದರು. `ಧೈರ್ಯಂ’ ಸಿನಿಮಾನೋಡಿಬಂದವರು ಅಜಯ್ ರಾವ್ ಬದಲಾಗಿರುವ ರೀತಿ ಕಂಡು ನಿಜಕ್ಕೂ ಆಶ್ಚರ್ಯ ವ್ಯಕ್ತಪಡಿಸುವಂತಿದೆ. ಅಷ್ಟರ ಮಟ್ಟಿಗೆ ಅಜಯ್ ಮಾಸ್ ಹೀರೋ ಆಗಿ ಮಿಂಚಿದ್ದಾರೆ.
ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಈ ಚಿತ್ರದ ನಿರ್ದೇಶಕ ಶಿವತೇಜಸ್ ಕಮರ್ಷಿಯಲ್ ಸಿನಿಮಾದ ಫಾರ್ಮುಲಾಗಳನ್ನು ಅರೆದು ಕುಡಿದವರಂತೆ `ಧೈರ್ಯಂ’ ಅನ್ನು ಕಟ್ಟಿಕೊಟ್ಟಿದ್ದಾರೆ.
ತಂದೆಯ ಅನಾರೋಗ್ಯ, ಹೂಕಟ್ಟಿ ಮಗನನ್ನು ಸಲಹುತ್ತಾ ಸಂಸಾರ ತೂಗಿಸುವ ತಾಯಿ, ಬಡತನವಿದ್ದರೂ ಸ್ವಾಭಿಮಾನ ಬಿಡದ ಕುಟುಂಬದ ಹುಡುಗ ಕೃಷ್ಣ. ಇಂಜಿನಿಯರಿಂಗ್ ವಿದ್ಯಾರ್ಥಿ, ಕಂಪ್ಯೂಟರ್, ಮೊಬೈಲುಗಳನ್ನು ಬಳಸೋದರಲ್ಲಿ ಮಾಸ್ಟರ್ ಮೈಂಡ್. ಇಂಥ ಹುಡುಗ ಪೊಲೀಸ್ ಅಧಿಕಾರಿ, ಮಿನಿಸ್ಟರುಗಳನ್ನೇ ಆಟವಾಡಿಸೋ ಹಂತಕ್ಕೆ ಬೆಳೆಯುತ್ತಾನೆ. ಭವಿಷ್ಯವನ್ನು ಹಿಂಡುವ ಬಡತನದಿಂದ ಹೊರಬರಲು ಹೀರೋ ರೂಪಿಸುವ ಸ್ಕೆಚ್ ಯಾವುದು? ಅದರಿಂದ ಆತ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ? ಕಡೆಗೆ ಜೀವ ಉಳಿಸಿಕೊಳ್ಳಲು ಯಾವ ರೀತಿಯ ಮೈಂಡ್ ಗೇಮ್ ತಂತ್ರವನ್ನು ಅನುಸರಿಸುತ್ತಾನೆ ಅನ್ನೋದು `ಧೈರ್ಯಂ’ ಚಿತ್ರದ ಒಟ್ಟು ಸಾರ. ಇಲ್ಲಿ ಮನೆಮಂದಿಗೆಲ್ಲಾ ಇಷ್ಟವಾಗುವ ಸೆಂಟಿಮೆಂಟ್, ಥ್ರಿಲ್ಲು, ಲವ್ವು ಜೊತೆಗೆ ಹೊಡೆದಾಟ ಕೂಡಾ ಇದೆ.
ಮಿಡ್ಲ್ ಕ್ಲಾಸ್ ಹುಡುಗನೊಬ್ಬ ಮಹಾನ್ ದೈತ್ಯ ಪೊಲೀಸ್ ಅಧಿಕಾರಿಯನ್ನು ಎದುರುಹಾಕಿಕೊಂಡು ತಣ್ಣಗೆ ಅಬ್ಬರಿಸುವುದೇ ಚಿತ್ರದ ಜೀವಾಳವಾಗಿರುವುದರಿಂದ ಅಜಯ್ ರಾವ್ ಮತ್ತು ರವಿಶಂಕರ್ ಅವರ ಕಾಂಬಿನೇಷನ್ ಸಖತ್ ವರ್ಕೌಟ್ ಆಗಿದೆ. ಸಾಧು ಕೋಕಿಲಾ ಅವರ ಪಾತ್ರ ವಾಟಾಳ್ ನಾಗರಾಜ್ ಅವರನ್ನೇ ಹೋಲೋದರಿಂದ ಎಷ್ಟು ಬೇಕೋ ಅಷ್ಟು ನಕ್ಕುಬಿಡಬಹುದು.
ಕೆಳಮಧ್ಯಮವರ್ಗದ ಕುಟುಂಬಗಳ ತಲ್ಲಣಗಳು, ರಾಜಕಾರಣಿಗಳ ಕುತುಂತ್ರ, ಅಧಿಕಾರಸ್ಥರ ಕೌರ್ಯಗಳೆಲ್ಲವನ್ನೂ ಒಂದು ಕಥೆಯಾಗಿ ರೂಪಿಸುವಲ್ಲಿ ಮತ್ತು ಅದನ್ನು ಜನಕ್ಕಿಷ್ಟವಾಗುವಂತೆ ಕಟ್ಟಿಕೊಡುವಲ್ಲಿ ನಿರ್ದೇಶಕ ಶಿವತೇಜಸ್ ಗೆದ್ದಿದ್ದಾರೆ. ಆರಂಭದಿಂದ ಅಂತ್ಯದ ವರೆಗೂ ಎಲ್ಲೂ ಬೋರು ಹೊಡೆಸದೆ, ಊಹೆಗೆ ನಿಲುಕದ ಟ್ವಿಸ್ಟುಗಳನ್ನು ನೀಡಿ ಬಿಗಿಯಾದ ಚಿತ್ರಕತೆ ಹೊಂದಿರುವ ಮನರಂಜನಾತ್ಮಕ ಸಿನಿಮ ಧೈರ್ಯಂ.
ಈ ಸಿನಿಮಾದ ಮೂಲಕ ಅಜಯ್ ರಾವ್ ಈ ವರೆಗಿನ ಇಮೇಜು ಬದಲಾಗಿದೆ. ಇನ್ನು ಯಾವ ಪಾತ್ರದಲ್ಲಿ ಬೆಕಾದರೂ ಅಜಯ್ ನಟಿಸಬಹುದು. ಹಾಗೆಯೇ ಕನ್ನಡಕ್ಕೊಬ್ಬ ಪಕ್ಕಾ ಕಮರ್ಷಿಯಲ್ ಟಚ್ ನೀಡುವ ಡೈರೆಕ್ಟರ್ ಕೂಡಾ ದಕ್ಕಿದಂತಾಗಿದೆ. ಉತ್ತಮ ತಾಂತ್ರಿಕತೆಯನ್ನೂ ಹೊಂದಿರುವ `ಧೈರ್ಯಂ’ಗೆ ಛಾಯಾಗ್ರಾಹಕ ಶೇಖರ್ ಚಂದ್ರ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ…
Courtesy ; cinibuzz.in

Previous Post Next Post

Contact Form